
ಬೆಳಗಾವಿ:
ಬೆಂಗಳೂರು ಸೇರಿದಂತೆ ಕರ್ನಾಟಕದ ನಗರಗಳಲ್ಲಿ ಬಾಡಿಗೆ ಮನೆಗಳ ಬೇಡಿಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಮನೆ ಮಾಲೀಕರು ಮತ್ತು ಬಾಡಿಗೆದಾರರ ನಡುವೆ ಉದ್ಭವಿಸುತ್ತಿರುವ ವಿವಾದಗಳನ್ನು ಕಡಿಮೆ ಮಾಡಲು ಹಾಗೂ ಬಾಡಿಗೆ ವ್ಯವಹಾರದಲ್ಲಿ ಪಾರದರ್ಶಕತೆ ತರಲು ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಕಾನೂನು, ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಹೆಚ್.ಕೆ. ಪಾಟೀಲ್ ಅವರು ವಿಧಾನಸಭೆಯಲ್ಲಿ ‘ಕರ್ನಾಟಕ ಬಾಡಿಗೆ ತಿದ್ದುಪಡಿ ವಿಧೇಯಕ-2025’ ಅನ್ನು ಅಧಿಕೃತವಾಗಿ ಮಂಡಿಸಿದರು.
ಯಾಕೆ ಹೊಸ ತಿದ್ದುಪಡಿ ಅಗತ್ಯವಾಯಿತು?
ಬೆಂಗಳೂರು, ಮೈಸೂರೂ, ಮಂಗಳೂರು ಸೇರಿದಂತೆ ಮಹಾನಗರ ಪ್ರದೇಶಗಳಲ್ಲಿ
- ಬಾಡಿಗೆ ಮನೆಗಳ ಸಂಖ್ಯೆ ಹೆಚ್ಚಳ
- ಮನೆ ಮಾಲೀಕರು – ಬಾಡಿಗೆದಾರರ ನಡುವೆ ಜಗಳಗಳು
- ಬಾಡಿಗೆ ಒಪ್ಪಂದಗಳಲ್ಲಿನ ಸ್ಪಷ್ಟತೆಯ ಕೊರತೆ
- ಅನಧಿಕೃತ ಬ್ರೋಕರ್‌ಗಳ ಮೂಲಕ ನಡೆಯುವ ದುರುಪಯೋಗ
ಈ ಸಮಸ್ಯೆಗಳ ಪರಿಣಾಮವಾಗಿ, 1999ರ ಬಾಡಿಗೆ ಕಾಯ್ದೆಯಲ್ಲಿದ್ದ ಹಳೆಯ ನಿಯಮಗಳು ನಗರೀಕರಣದ ವೇಗಕ್ಕೆ ಸರಿಹೊಂದುತ್ತಿಲ್ಲವೆಂದು ಸರ್ಕಾರ ವಿಶ್ಲೇಷಿಸಿದೆ. ಇದರಿಂದ ಹೊಸ ಹಾಗೂ ದೃಢವಾದ ಬಾಡಿಗೆ ನೀತಿ ರೂಪಿಸುವ ಅಗತ್ಯ ಉಂಟಾಯಿತು.
ಬಾಡಿಗೆದಾರರಿಗೆ ಮತ್ತು ಮನೆ ಮಾಲೀಕರಿಗೆ ಅನ್ವಯವಾಗುವ ಹೊಸ ನಿಯಮಗಳು
ತಿದ್ದುಪಡಿಯಲ್ಲಿ ಮನೆ ಮಾಲೀಕರಿಗೂ ಹಾಗೂ ಬಾಡಿಗೆದಾರರಿಗೂ ಸಮಾನ ಜವಾಬ್ದಾರಿಯನ್ನು ನಿಗದಿಪಡಿಸಲಾಗಿದೆ. ಯಾವ ಪಕ್ಷವೂ ನಿಯಮ ಉಲ್ಲಂಘಿಸಿದರೆ ಭಾರೀ ದಂಡ ಬೀಳುವಂತೆ ಸರ್ಕಾರ ಗಟ್ಟಿತನ ತೋರಿದೆ.
1. ಅನಧಿಕೃತ ಸಬ್-ರೇಂಟ್‌ಗೆ ಭಾರೀ ದಂಡ
ಮಾಲೀಕರ ಅನುಮತಿ ಇಲ್ಲದೇ ಬಾಡಿಗೆ ಮನೆ ಬೇರೊಬ್ಬರಿಗೆ ಬಾಡಿಗೆಗೆ ನೀಡಿದರೆ:
- ಹಳೆಯ ದಂಡ: ₹5,000
- ಹೊಸ ದಂಡ: ₹50,000
ಇದು ಸುಮಾರು 90% ದಂಡ ಹೆಚ್ಚಳ — ಬಾಡಿಗೆ ಮನೆ ದುರುಪಯೋಗ ಬಗೆಹರಿಸಲು ಸರ್ಕಾರ ಗಂಭೀರವಾಗಿದೆ ಎಂಬುದು ಸ್ಪಷ್ಟ.
2. ಅನಧಿಕೃತ ಬ್ರೋಕರ್‌ಗಳಿಗೆ ಕಟ್ಟುನಿಟ್ಟಿನ ಕ್ರಮ
ಬ್ರೋಕರ್‌ಗಳ ದುರುಪಯೋಗ ತಡೆಯಲು ಹಾಗೂ ಮಧ್ಯವರ್ತಿಗಳ ಪಾರದರ್ಶಕತೆ ಖಚಿತಪಡಿಸಲು ತಿದ್ದುಪಡಿ ಪ್ರಸ್ತಾಪವು ಅತ್ಯಂತ ಕಠಿಣವಾಗಿದೆ.
- ನೋಂದಣಿ ಇಲ್ಲದೆ ಕೆಲಸ ಮಾಡಿದರೆ: ದಿನಕ್ಕೆ ₹25,000 ದಂಡ
- ಹಳೆಯ ದಂಡ: ₹2,000
- ಮರು ತಪ್ಪು ಮಾಡಿದರೆ: ದಿನಕ್ಕೆ ಹೆಚ್ಚುವರಿ ₹20,000 ದಂಡ
ಈ ಕ್ರಮದಿಂದ ‘ಬ್ರೋಕರ್ ಮಾಫಿಯಾ’ ನಿಯಂತ್ರಣಕ್ಕೆ ಬರುತ್ತದೆ ಎಂದು ಸರ್ಕಾರ ವಿಶ್ವಾಸ ವ್ಯಕ್ತಪಡಿಸಿದೆ.
ಬಾಡಿಗೆ ಒಪ್ಪಂದ ಈಗ ಆನ್‌ಲೈನ್ – ಪಾರದರ್ಶಕತೆ ಹೆಚ್ಚಳ
ರಾಜ್ಯ ಸರ್ಕಾರ ಈಗಾಗಲೇ ಬಾಡಿಗೆ ಒಪ್ಪಂದಗಳಿಗಾಗಿ ಒನ್‌ಲೈನ್ ಪೋರ್ಟಲ್ ಆರಂಭಿಸಿದೆ.
ಈ ಕ್ರಮದಿಂದ:
- ಕಾನೂನಾತ್ಮಕವಾಗಿ ಮಾನ್ಯವಾದ ಬಾಡಿಗೆ ಒಪ್ಪಂದಗಳು ಸಾಧ್ಯ
- ಕಾಗದ ಪತ್ರದ ಅನಧಿಕೃತ ವ್ಯವಹಾರಕ್ಕೆ ಅಂತ್ಯ
- ನ್ಯಾಯಾಂಗ ಪ್ರಕರಣಗಳ ಸಂಖ್ಯೆ ಕಡಿಮೆ
- ಬಾಡಿಗೆ ಸಂಬಂಧಿತ ದಾಖಲೆಗಳು ಡಿಜಿಟಲ್ ಆಗಿ ಸಂಗ್ರಹ
ನಗರಗಳಲ್ಲಿ ಸಾಮಾನ್ಯವಾಗಿ ನಡೆಯುವ ಅನೌಪಚಾರಿಕ ಒಪ್ಪಂದಗಳನ್ನು ತಡೆಗಟ್ಟುವಲ್ಲಿ ಇದು ಪ್ರಮುಖ ಹೆಜ್ಜೆಯಾಗಲಿದೆ.
ಮನೆ ಮಾಲೀಕರಿಂದ ನೋಟಿಸ್ ಅನಿವಾರ್ಯ
ಮನೆ ಮಾಲೀಕರು ಬಾಡಿಗೆದಾರರನ್ನು ಮನೆಯಿಂದ ಹೊರಹಾಕುವ ಮೊದಲು:
- ಮುಂಚಿತ ನೋಟಿಸ್ ನೀಡಬೇಕು
- ಸರಿಯಾದ ಕಾರಣ ನೀಡಬೇಕು
- ಕಾನೂನು ಪ್ರಕಾರ ಅವಕಾಶ ನೀಡಬೇಕು
ಈ ನಿಯಮವು ಬಾಡಿಗೆದಾರರ ಹಕ್ಕುಗಳನ್ನು ರಕ್ಷಿಸುವ ಪ್ರಮುಖ ತಿದ್ದುಪಡಿಯಾಗಿದೆ.
ಸರ್ಕಾರದಿಂದ ತೆರಿಗೆ ವಿನಾಯಿತಿ – ಕಡಿಮೆ ಬಾಡಿಗೆ ಮನೆಗಳಿಗೆ ಉತ್ತೇಜನ
ಕಡಿಮೆ ಬಾಡಿಗೆಗೆ ಮನೆ ನೀಡುವ ಮನೆಮಾಲೀಕರಿಗೆ ಸರ್ಕಾರ:
- ತೆರಿಗೆ ಸಡಿಲಿಕೆ
- ಸಬ್ಸಿಡಿ
ನೀಡುವ ವಿಚಾರವನ್ನು ಪರಿಗಣಿಸುತ್ತಿದೆ. ಕಡಿಮೆ ಬೆಲೆಯ ಮನೆಗಳು ಲಭ್ಯವಾಗಲು ಇದು ಮಹತ್ತರ ನೆರವಾಗಲಿದೆ.
ವಿವಾದಗಳನ್ನು ಬೇಗನೆ ಇತ್ಯರ್ಥಪಡಿಸಲು ಫಾಸ್ಟ್-ಟ್ರ್ಯಾಕ್ ವ್ಯವಸ್ಥೆ
ಬಾಡಿಗೆಗೆ ಸಂಬಂಧಿಸಿದ ದಾವೆಗಳು ಸಾಮಾನ್ಯ ನ್ಯಾಯಾಲಯಗಳಲ್ಲಿ ವರ್ಷಗಳಿಂದ ಬಾಕಿಯಾಗಿರುವುದು ಸಾಮಾನ್ಯ. ಇದಕ್ಕೆ ಪರಿಹಾರವಾಗಿ:
- ವಿಶೇಷ ಫಾಸ್ಟ್ ಟ್ರ್ಯಾಕ್ ಕೋರ್ಟ್ ಪ್ರಸ್ತಾಪ
- ಬಾಡಿಗೆ ವ್ಯಾಜ್ಯಗಳ ತ್ವರಿತ ನಿವಾರಣೆ
- ಮಾಲೀಕರು ಮತ್ತು ಬಾಡಿಗೆದಾರರಿಗೆ ಬೇಗನೆ ನ್ಯಾಯ
ಈ ಕ್ರಮದಿಂದ ಕಾನೂನು ಪ್ರಕ್ರಿಯೆಯ ವೇಗ ಹೆಚ್ಚಳವಾಗಲಿದೆ.
