ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ಜಾತ್ಯಾತೀತ ಜನತಾದಳ (ಜೆಡಿಎಸ್) ತೀವ್ರ ವಾಗ್ದಾಳಿ ನಡೆಸಿದ್ದು, ಇಂತಹ ವರ್ತನೆ ತೋರುವ ವ್ಯಕ್ತಿ ಜನಪ್ರತಿನಿಧಿಯಾಗಿ ಮುಂದುವರಿಯಲು ಅರ್ಹನಲ್ಲ ಎಂದು ಕಿಡಿಕಾರಿದೆ. ಕೂಡಲೇ ಡಿಕೆ ಶಿವಕುಮಾರ್ ಅವರ ರಾಜೀನಾಮೆ ಪಡೆಯಬೇಕು ಎಂದು ಜೆಡಿಎಸ್ ಆಗ್ರಹಿಸಿದೆ.
ಬೆಂಗಳೂರು ಅಪಾರ್ಟ್‌ಮೆಂಟ್ ಫೆಡರೇಶನ್ ಶನಿವಾರ ಆಯೋಜಿಸಿದ್ದ ಕರ್ನಾಟಕ ಅಪಾರ್ಟ್‌ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ಮಸೂದೆ–2025 ಕುರಿತ ಸಾರ್ವಜನಿಕ ಸಂವಾದ ಕಾರ್ಯಕ್ರಮದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ನೀಡಿದ ಹೇಳಿಕೆಗಳು ವಿವಾದಕ್ಕೆ ಕಾರಣವಾಗಿವೆ. ಈ ಹೇಳಿಕೆಗಳನ್ನು ತೀವ್ರವಾಗಿ ಖಂಡಿಸಿರುವ ಜೆಡಿಎಸ್, ಡಿಕೆಶಿಯವರ ಮಾತುಗಳು ಸಂವಿಧಾನಾತ್ಮಕ ಮೌಲ್ಯಗಳಿಗೆ ವಿರುದ್ಧವಾಗಿವೆ ಎಂದು ಆರೋಪಿಸಿದೆ.
ಈ ಕುರಿತು ಸರಣಿ ಟ್ವೀಟ್‌ಗಳ ಮೂಲಕ ಪ್ರತಿಕ್ರಿಯಿಸಿರುವ ಜೆಡಿಎಸ್,
“ಡಿಕೆ ಶಿವಕುಮಾರ್ ಅವರೇ, ನೀವು ಶಾಸಕರಾದರೂ ಏನು, ಸಚಿವರಾದರೂ ಏನು, ಡಿಸಿಎಂ ಆದರೂ ಏನು? ನೀನೊಬ್ಬ ಮನುಷ್ಯ ಅಷ್ಟೇ. ಜನರಿಂದ ಆಯ್ಕೆಯಾದ ಪ್ರತಿನಿಧಿಯಾಗಿ ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದು ನಿಮ್ಮ ಕರ್ತವ್ಯ. ಅದನ್ನು ಬಿಟ್ಟು ಪ್ರಶ್ನೆ ಕೇಳಿದವರಿಗೆ ಧಮ್ಕಿ, ಬೆದರಿಕೆ ಹಾಕುವುದು ಸಂವಿಧಾನಾತ್ಮಕ ಅಪರಾಧ. ನಾವು ಇನ್ನೂ 80ರ ದಶಕದಲ್ಲಿ ಬದುಕುತ್ತಿಲ್ಲ” ಎಂದು ವಾಗ್ದಾಳಿ ನಡೆಸಿದೆ.
ಮುಂದುವರೆದು ಜೆಡಿಎಸ್,
“ನಿಮ್ಮ ಬಳಿ ಹಣ ಇದ್ದರೂ ಅದು ‘ನಾಯಿ ಮೊಲೆ ಹಾಲಿನಂತೆ’ – ಯಾರಿಗೂ ಪ್ರಯೋಜನವಿಲ್ಲ. ಅಧಿಕಾರದ ಮದ, ದರ್ಪ ಮತ್ತು ದಬ್ಬಾಳಿಕೆ ನಿಮ್ಮ ನೆತ್ತಿಗೇರಿದೆ. ಕೊತ್ವಾಲ್ ಶಿಷ್ಯನ ರೌಡಿಸಂ ಹಾಗೂ ಗೂಂಡಾ ಪ್ರವೃತ್ತಿಗೆ ಕಡಿವಾಣ ಹಾಕದಿದ್ದರೆ ಅದು ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಪಾಯಕಾರಿಯಾಗಿದೆ. ಇಂತಹವರು ಜನಪ್ರತಿನಿಧಿಯಾಗಿ ಮುಂದುವರಿಯಲು ನಾಲಾಯಕ್” ಎಂದು ಕಿಡಿಕಾರಿದೆ.
ಕಾಂಗ್ರೆಸ್ ಹೈಕಮಾಂಡ್ ಮತ್ತು ರಾಹುಲ್ ಗಾಂಧಿಯವರನ್ನೂ ಉಲ್ಲೇಖಿಸಿರುವ ಜೆಡಿಎಸ್,
“ಸಂವಿಧಾನ ರಕ್ಷಣೆ ಬಗ್ಗೆ ಮಾತನಾಡುವ ಕಾಂಗ್ರೆಸ್ ಮೊದಲು ಡಿಕೆಶಿಯಂತಹ ರೌಡಿ ರಾಜಕಾರಣಿಯ ರಾಜೀನಾಮೆ ಪಡೆದು, ನಂತರ ದೇಶದ ಜನತೆಗೆ ಸಂವಿಧಾನದ ಪಾಠ ಮಾಡಲಿ” ಎಂದು ವ್ಯಂಗ್ಯವಾಡಿದೆ.
ಮತ್ತೊಂದು ಟ್ವೀಟ್‌ನಲ್ಲಿ,
“ಮಿಸ್ಟರ್ ಧಮ್ಕಿ ಡಿಕೆಶಿ ಅವರೇ, ನಿಮ್ಮ ಹಿನ್ನೆಲೆ ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ. ಉಪಮುಖ್ಯಮಂತ್ರಿಯಾಗಿ, ಬೆಂಗಳೂರು ನಗರಾಭಿವೃದ್ಧಿ ಸಚಿವರಾಗಿ ವೇದಿಕೆಯಲ್ಲೇ ನಾಗರಿಕರನ್ನು ಬೀದಿರೌಡಿಯಂತೆ ಹೆದರಿಸುವುದು ಜನಪ್ರತಿನಿಧಿಗಳಿಗೆ ಶೋಭೆ ತರುವುದಿಲ್ಲ. ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೆ. ಜನಪ್ರತಿನಿಧಿಯನ್ನು ಪ್ರಶ್ನಿಸುವ ಹಕ್ಕು ಪ್ರತಿಯೊಬ್ಬ ನಾಗರಿಕನಿಗೂ ಇದೆ. ಸಂವಿಧಾನ ಪುಸ್ತಕ ಹಿಡಿದರೆ ಮಾತ್ರ ಸಂವಿಧಾನ ರಕ್ಷಿಸಿದಂತಾಗುವುದಿಲ್ಲ. ನಿಮ್ಮ ಅಹಂಕಾರಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ” ಎಂದು ಜೆಡಿಎಸ್ ಎಚ್ಚರಿಸಿದೆ.
ಡಿಕೆ ಶಿವಕುಮಾರ್ ಹೇಳಿದ್ದೇನು?
ಸರ್ಕಾರ ತನ್ನ ಹಲವಾರು ಭರವಸೆಗಳನ್ನು ಈಡೇರಿಸಿದ್ದರೂ ಅಪಾರ್ಟ್‌ಮೆಂಟ್ ನಿವಾಸಿಗಳು ಪರಂಪರೆಯಿಂದಲೇ ಕಾಂಗ್ರೆಸ್‌ಗೆ ಬೆಂಬಲ ನೀಡುತ್ತಿಲ್ಲ ಎಂಬುದನ್ನು ಉಲ್ಲೇಖಿಸಿದ್ದ ಡಿಕೆ ಶಿವಕುಮಾರ್, ಮುಂಬರುವ ಜಿಬಿಎ (GBA) ಚುನಾವಣೆಯನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಹೆದರಿಸುವ ರೀತಿಯಲ್ಲಿ ಪತ್ರ ಬರೆದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
“ನಾನು ಮನೆ ಖರೀದಿದಾರರ ಪರವಾಗಿ ನಿಲ್ಲುವ ಕಾರಣಕ್ಕೆ ಈ ಸಭೆಯನ್ನು ಕರೆದಿದ್ದೇನೆ. ನಿಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳುತ್ತೇನೆ. ಅದೇ ಸಮಯದಲ್ಲಿ ಮುಂಬರುವ ಜಿಬಿಎ ಚುನಾವಣೆಯಲ್ಲಿ ನಿಮ್ಮ ಬೆಂಬಲವನ್ನೂ ನಿರೀಕ್ಷಿಸುತ್ತೇನೆ. ನೀವು ನನ್ನನ್ನು ನಿರಾಶೆಗೊಳಿಸುವುದಿಲ್ಲ ಎಂಬ ವಿಶ್ವಾಸ ನನಗಿದೆ” ಎಂದು ಡಿಸಿಎಂ ಸೂಚ್ಯವಾಗಿ ಹೇಳಿದ್ದಾರೆ.
ಇದೇ ವೇಳೆ ಕಿರಣ್ ಹೆಬ್ಬಾರ್ ಎಂಬವರು ಸರ್ಕಾರಕ್ಕೆ ಬರೆದ ಪತ್ರದ ಧಾಟಿಯನ್ನು ಟೀಕಿಸಿದ ಡಿಕೆ ಶಿವಕುಮಾರ್,
“ಪ್ರಧಾನಿ ಹಾಗೂ ಗೃಹ ಸಚಿವರಿಗೂ ಹೆದರದೆ ಜೈಲಿಗೆ ಹೋಗಿ ಬಂದವನು ನಾನು. ಅಂತಹವನಿಗೆ ಕಿರಣ್ ಹೆಬ್ಬಾರ್ ಅವರಂತಹವರ ಗೊಡ್ಡು ಬೆದರಿಕೆಗಳು ಯಾವ ಭಯವನ್ನೂ ಉಂಟುಮಾಡುವುದಿಲ್ಲ. ಪ್ರೀತಿಯಿಂದ ಮಾತನಾಡಿಸಿದರೆ ಪ್ರೀತಿಯಿಂದಲೇ ಉತ್ತರಿಸುತ್ತೇನೆ” ಎಂದು ಕಠಿಣವಾಗಿ ಪ್ರತಿಕ್ರಿಯಿಸಿದ್ದರು.
ಈ ಹೇಳಿಕೆಗಳೇ ಇದೀಗ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಜೆಡಿಎಸ್ ಹಾಗೂ ಕಾಂಗ್ರೆಸ್ ನಡುವೆ ವಾಕ್ಸಮರ ತೀವ್ರಗೊಂಡಿದೆ.
