ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಕೆಲವು ದಿನಗಳಿಂದ ಮೈ ಕೊರೆಯುವ ಚಳಿ ಮುಂದುವರಿದಿದ್ದು, ಜನಜೀವನದ ಮೇಲೆ ಸ್ಪಷ್ಟವಾದ ಪರಿಣಾಮ ಬೀರುತ್ತಿದೆ. ಡಿಸೆಂಬರ್ 13, 2025 ರಂದು ನಗರದಲ್ಲಿ ಕನಿಷ್ಠ ತಾಪಮಾನ 13.3 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು, ಇದು ಕಳೆದ ಎಂಟು ವರ್ಷಗಳಲ್ಲಿ ದಾಖಲಾಗಿರುವ ಅತ್ಯಂತ ಕಡಿಮೆ ತಾಪಮಾನವಾಗಿದೆ.
ಹವಾಮಾನ ಇಲಾಖೆ ದಾಖಲೆಗಳ ಪ್ರಕಾರ, ಡಿಸೆಂಬರ್ 29, 1883 ರಂದು ಬೆಂಗಳೂರಿನಲ್ಲಿ ಇತಿಹಾಸದಲ್ಲೇ ಅತ್ಯಂತ ಕಡಿಮೆ 8.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು. ಇತ್ತೀಚಿನ ವರ್ಷಗಳಲ್ಲಿ ಡಿಸೆಂಬರ್ 11, 2016 ರಂದು 12 ಡಿಗ್ರಿ ಸೆಲ್ಸಿಯಸ್ ಮತ್ತು ಡಿಸೆಂಬರ್ 24, 2011 ರಂದು 12.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿತ್ತು. ಡಿಸೆಂಬರ್ 16, 2013 ರಂದು 13.6 ಡಿಗ್ರಿ ಹಾಗೂ ಡಿಸೆಂಬರ್ 18, 2018 ರಂದು 13.7 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇದೀಗ ಎಂಟು ವರ್ಷಗಳ ಬಳಿಕ ಮತ್ತೆ ಕಡಿಮೆ ತಾಪಮಾನ ದಾಖಲಾಗಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಕರ್ನಾಟಕದ ಹಲವು ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಜೊತೆಗೆ ಕೆಲವು ಪ್ರದೇಶಗಳಲ್ಲಿ ಹಗುರವಾದ ಮಳೆಯಾಗುವ ಸಾಧ್ಯತೆಯೂ ಇದೆ.
ಈ ಕುರಿತು ಮಾಹಿತಿ ನೀಡಿದ ಐಎಂಡಿ ಹಿರಿಯ ವಿಜ್ಞಾನಿ ಸಿಎಸ್ ಪಾಟೀಲ್ ಅವರು, ಡಿಸೆಂಬರ್ 15, 2025 ರಿಂದ ರಾತ್ರಿಯ ತಾಪಮಾನದಲ್ಲಿ ಸ್ವಲ್ಪ ಏರಿಕೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ. ಆಗ್ನೇಯ ದಿಕ್ಕಿನಿಂದ ಬೀಸುವ ಗಾಳಿಯಿಂದ ವಾತಾವರಣದಲ್ಲಿ ತೆಳುವಾದ ಮೋಡಗಳ ಪದರ ಹಾಗೂ ನೀರಿನ ಆವಿಯ ಪ್ರಮಾಣ ಹೆಚ್ಚಾಗಲಿದೆ. ಇದರಿಂದ ಹಗಲಿನ ತಾಪಮಾನದಲ್ಲಿ ಇಳಿಕೆ ಮತ್ತು ರಾತ್ರಿಯ ತಾಪಮಾನ ಸ್ವಲ್ಪ ಮಟ್ಟಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ವಿವರಿಸಿದರು.
