ಬೆಂಗಳೂರು ಗ್ರಾಮಾಂತರ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ‘ಅನ್ನ ಸುವಿಧಾ’ ಯೋಜನೆ ರಾಜ್ಯಾದ್ಯಂತ ಹಂತ ಹಂತವಾಗಿ ಜಾರಿಯಾಗುತ್ತಿದ್ದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಯೋಜನೆ ಯಶಸ್ವಿಯಾಗಿ ಅನುಷ್ಠಾನಗೊಂಡಿದೆ. 75 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ಸಾಲಿನಲ್ಲಿ ನಿಲ್ಲುವ ತೊಂದರೆಯನ್ನು ತಪ್ಪಿಸುವ ಉದ್ದೇಶದಿಂದ ರೂಪಿಸಲಾದ ಈ ಯೋಜನೆಯಡಿ, ಪಡಿತರವನ್ನು ನೇರವಾಗಿ ಫಲಾನುಭವಿಗಳ ಮನೆಬಾಗಿಲಿಗೆ ತಲುಪಿಸಲಾಗುತ್ತಿದೆ. ಇದರಿಂದ ವಯೋವೃದ್ಧರಿಗೆ ದೊಡ್ಡ ಮಟ್ಟದ ನಿರಾಳತೆ ದೊರೆತಿದ್ದು, ಇತರ ಜಿಲ್ಲೆಗಳಿಗೆ ಇದು ಮಾದರಿಯಾಗುತ್ತಿದೆ.
ಸದ್ಯ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 4,975 ಮಂದಿ ಹಿರಿಯ ನಾಗರಿಕರು ‘ಅನ್ನ ಸುವಿಧಾ’ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಇ-ಕೆವೈಸಿ ಪೂರ್ಣಗೊಂಡಿದ್ದು, ಮನೆಯಲ್ಲಿ ಕೇವಲ 75 ವರ್ಷ ಮೇಲ್ಪಟ್ಟ ಏಕ ಸದಸ್ಯರೇ ಇರುವ ಪಡಿತರ ಚೀಟಿದಾರರು ಈ ಯೋಜನೆಗೆ ಅರ್ಹರಾಗಿದ್ದಾರೆ. ತಿಂಗಳ ಮೊದಲ ದಿನದಿಂದ ಐದನೇ ದಿನದೊಳಗೆ ಪಡಿತರವನ್ನು ಮನೆಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಇದರಿಂದ ಗಂಟೆಗಟ್ಟಲೆ ನ್ಯಾಯಬೆಲೆ ಅಂಗಡಿಗಳ ಮುಂದೆ ಕಾಯಬೇಕಾದ ಹಿರಿಯರ ಕಷ್ಟಕ್ಕೆ ಶಾಶ್ವತ ಪರಿಹಾರ ದೊರೆತಿದೆ.
ಅನ್ನ ಸುವಿಧಾ ಯೋಜನೆ ಎಂದರೇನು?
‘ಅನ್ನ ಸುವಿಧಾ’ ಯೋಜನೆ ಅನ್ನಭಾಗ್ಯ ಯೋಜನೆಯಡಿನ ವಿಶೇಷ ಸೌಲಭ್ಯವಾಗಿದ್ದು, ಪಡಿತರ ಪಡೆಯಲು ಶಾರೀರಿಕವಾಗಿ ಅಶಕ್ತರಾದ ಹಿರಿಯ ನಾಗರಿಕರನ್ನು ಗಮನದಲ್ಲಿಟ್ಟುಕೊಂಡು ಜಾರಿಗೊಳಿಸಲಾಗಿದೆ. ಮನೆಯಲ್ಲಿ ಕೇವಲ ಹಿರಿಯ ನಾಗರಿಕರೇ ಇರುವ ಕುಟುಂಬಗಳಿಗೆ, ನ್ಯಾಯಬೆಲೆ ಅಂಗಡಿಯ ವಿತರಕರು ನೇರವಾಗಿ ಮನೆಬಾಗಿಲಿಗೆ ಪಡಿತರ ತಲುಪಿಸುತ್ತಾರೆ. ಈ ಸೇವೆಗೆ ಪ್ರತಿಯೊಂದು ಅರ್ಹ ಕುಟುಂಬಕ್ಕೆ ಸರ್ಕಾರವು 50 ರೂ. ಪ್ರೋತ್ಸಾಹಧನವನ್ನು ಅಂಗಡಿ ಮಾಲೀಕರಿಗೆ ನೀಡುತ್ತಿದೆ. ಯೋಜನೆಯ ಲಾಭ ಪಡೆಯಲು ನೋಂದಣಿ ಕಡ್ಡಾಯವಾಗಿದೆ.
ನೋಂದಣಿ ಮತ್ತು ವಿತರಣಾ ಪ್ರಕ್ರಿಯೆ:
ಯೋಜನೆಯ ಪ್ರಯೋಜನ ಪಡೆಯಲು ಫಲಾನುಭವಿಗಳು ಆನ್‌ಲೈನ್ ಅಥವಾ ಆಫ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬಹುದು.
– ಸೇವಾ ಸಿಂಧು ಪೋರ್ಟಲ್ ಮೂಲಕ ಅಥವಾ ಸ್ಥಳೀಯ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ನೋಂದಣಿ ಸಾಧ್ಯ
– ಪ್ರತೀ ತಿಂಗಳ ಅಂತ್ಯದಲ್ಲಿ ಫಲಾನುಭವಿಯ ಪಡಿತರ ಚೀಟಿಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಮೂಲಕ ಮಾಹಿತಿ
– ಆಯಾ ತಿಂಗಳ 1 ರಿಂದ 5ರೊಳಗೆ ಮನೆಬಾಗಿಲಿಗೆ ಪಡಿತರ ವಿತರಣೆ
– ಒಟಿಪಿ ಹಾಗೂ ಬಯೋಮೆಟ್ರಿಕ್ ದೃಢೀಕರಣದ ಮೂಲಕ ಪಡಿತರ ವಿತರಣೆ
ಪಾರದರ್ಶಕತೆಗೆ ತಂತ್ರಜ್ಞಾನ ಬಳಕೆ:
ಪಡಿತರ ವಿತರಣೆಯಲ್ಲಿ ಪಾರದರ್ಶಕತೆ ಕಾಪಾಡಲು ‘ಅನ್ನ ಸುವಿಧಾ’ ಮೊಬೈಲ್ ಅಪ್ಲಿಕೇಶನ್ ಬಳಸಲಾಗುತ್ತಿದೆ. ವಿತರಣಾ ಸ್ಥಳದ ಜಿಯೋ-ಟ್ಯಾಗಿಂಗ್ ಮಾಡಲಾಗುತ್ತಿದ್ದು, ವಿತರಣೆ ವೇಳೆ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ಅಪ್‌ಲೋಡ್ ಮಾಡಬೇಕು. ಆಹಾರ ನಿರೀಕ್ಷಕರು ಸಹ ಕೆಲ ಫಲಾನುಭವಿಗಳನ್ನು ಭೇಟಿ ನೀಡಿ ವಿತರಣೆಯ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರದಲ್ಲಿ ಯೋಜನೆಯ ಸ್ಥಿತಿ:
ಜಿಲ್ಲೆಯಲ್ಲಿ ಒಟ್ಟು 376 ನ್ಯಾಯಬೆಲೆ ಅಂಗಡಿಗಳು ಮತ್ತು 2,52,672 ಪಡಿತರ ಚೀಟಿಗಳಿವೆ. ತಾಲೂಕುವಾರು ನೋಡಿದರೆ ದೊಡ್ಡಬಳ್ಳಾಪುರದಲ್ಲಿ 1,800, ದೇವನಹಳ್ಳಿಯಲ್ಲಿ 1,090, ಹೊಸಕೋಟೆಯಲ್ಲಿ 1,096 ಮತ್ತು ನೆಲಮಂಗಲದಲ್ಲಿ 989 ಹಿರಿಯ ಫಲಾನುಭವಿಗಳು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ.
ಆಹಾರ ಇಲಾಖೆಯ ಜಂಟಿ ನಿರ್ದೇಶಕಿ ಮಂಜುಳಾ ಅವರ ಪ್ರಕಾರ, “75 ವರ್ಷ ಮೇಲ್ಪಟ್ಟ ಅರ್ಹ ಹಿರಿಯರಿಗೆ ಯಾವುದೇ ತೊಂದರೆಯಾಗದಂತೆ ಮನೆಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ. ಸೇವೆ ಒದಗಿಸುವ ನ್ಯಾಯಬೆಲೆ ಅಂಗಡಿಗಳಿಗೆ ಪ್ರತಿ ಕಾರ್ಡ್‌ಗೆ 50 ರೂ. ನೀಡಲಾಗುತ್ತಿದ್ದು, ಯೋಜನೆ ಸುಗಮವಾಗಿ ನಡೆಯುತ್ತಿದೆ.”
ಈ ಮೂಲಕ ‘ಅನ್ನ ಸುವಿಧಾ’ ಯೋಜನೆ ಹಿರಿಯ ನಾಗರಿಕರ ಬದುಕಿಗೆ ಸಹಾಯವಾಗುವ ಪರಿಣಾಮಕಾರಿ ಮಾದರಿ ಯೋಜನೆಯಾಗಿ ಗುರುತಿಸಿಕೊಂಡಿದೆ.
