ಬೆಳಗಾವಿ, ಡಿ.17: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಬಡವರು, ನಿರುದ್ಯೋಗಿಗಳು ಹಾಗೂ ಸಾಮಾನ್ಯ ಜನರ ಪರವಾಗಿ ಯಾವುದೇ ಸಮರ್ಪಕ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದರು. ದೇಶದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಅವರು ಆರೋಪಿಸಿದರು.
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಜಾರಿ ನಿರ್ದೇಶನಾಲಯ ದಾಖಲಿಸಿದ್ದ ಆರೋಪಪಟ್ಟಿಯನ್ನು ವಿಚಾರಣಾ ನ್ಯಾಯಾಲಯ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ, ಆ ತೀರ್ಪನ್ನು ಬೆಂಬಲಿಸಿ ಬೆಳಗಾವಿಯ ಸುವರ್ಣಸೌಧದ ಗಾಂಧಿ ಪ್ರತಿಮೆ ಬಳಿ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಿಎಂ, ಕೇಂದ್ರ ಸರ್ಕಾರ ರಾಜಕೀಯ ದ್ವೇಷದಿಂದ ಪ್ರೇರಿತವಾಗಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದೆ ಎಂದು ಕಿಡಿಕಾರಿದರು.
ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿ ಸುಳ್ಳು ಪ್ರಕರಣಗಳನ್ನು ದಾಖಲಿಸಿ, ಭಯಭೀತಗೊಳಿಸುವ ಪ್ರಯತ್ನವನ್ನು ಬಿಜೆಪಿ ನಿರಂತರವಾಗಿ ನಡೆಸುತ್ತಿದೆ. ಇಂತಹ ದ್ವೇಷ ರಾಜಕಾರಣದ ವಿರುದ್ಧ ಕಾಂಗ್ರೆಸ್ ಪಕ್ಷ ಸದನದ ಒಳಗೂ ಹೊರಗೂ ಹೋರಾಟ ನಡೆಸಲಿದೆ. ಸ್ವಾತಂತ್ರ್ಯ ಹೋರಾಟದ ಇತಿಹಾಸ ಹೊಂದಿರುವ ಕಾಂಗ್ರೆಸ್ ಪಕ್ಷ ಯಾವುದೇ ಬೆದರಿಕೆಗೆ ಹೆದರುವುದಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಉದ್ಯೋಗ ಖಾತ್ರಿ ಯೋಜನೆಯ ಹೆಸರನ್ನು ಜಿ ರಾಮ್‌ಜಿ ಎಂದು ಬದಲಾಯಿಸಿರುವುದನ್ನು ಉಲ್ಲೇಖಿಸಿದ ಅವರು, ಹಿಂದೆ ಯೋಜನಾ ಆಯೋಗವನ್ನು ನೀತಿ ಆಯೋಗ ಎಂದು ಮರುನಾಮಕರಣ ಮಾಡಲಾಗಿದೆ. ಈಗ ಮುಂದೆ ಯೋಜನೆಗಳ ಹೆಸರನ್ನು ರಾಜಕೀಯ ಉದ್ದೇಶಕ್ಕೆ ತಕ್ಕಂತೆ ಬದಲಾಯಿಸುವ ಪ್ರಯತ್ನ ನಡೆಯುತ್ತಿದೆ ಎಂದು ಟೀಕಿಸಿದರು. ರಾಜ್ಯದ ಆಸ್ತಿಗಳ ಹೆಸರು ಬದಲಾಯಿಸಲು ಕೇಂದ್ರಕ್ಕೆ ಹಕ್ಕಿಲ್ಲ ಎಂದೂ ಸ್ಪಷ್ಟಪಡಿಸಿದರು.
ದೇಶದಲ್ಲಿ ಭ್ರಷ್ಟಾಚಾರ, ನಿರುದ್ಯೋಗ ಮತ್ತು ತೆರಿಗೆ ಭಾರ ಹೆಚ್ಚುತ್ತಿದೆ. 2014ರಲ್ಲಿ ನೀಡಿದ ಉದ್ಯೋಗ ಸೃಷ್ಟಿ ಮತ್ತು ಕಪ್ಪು ಹಣ ವಾಪಸ್ ತರುವ ಭರವಸೆಗಳು ಈಡೇರಿಲ್ಲ. ಬದಲಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮೂಲಕ ಜನರ ಮೇಲೆ ಹೊರೆ ಹಾಕಲಾಗಿದೆ ಎಂದು ಅವರು ಆರೋಪಿಸಿದರು.
ಸ್ವಾತಂತ್ರ್ಯ ನಂತರದಿಂದ ಮನಮೋಹನ್ ಸಿಂಗ್ ಅವರ ಅವಧಿವರೆಗೆ ದೇಶದ ಸಾಲ 53 ಲಕ್ಷ ಕೋಟಿ ರೂ. ಇತ್ತು. ಆದರೆ ಬಿಜೆಪಿ ಸರ್ಕಾರದ 11 ವರ್ಷಗಳಲ್ಲಿ ಅದು 200 ಲಕ್ಷ ಕೋಟಿ ರೂ. ಮೀರಿದೆ. ಈ ವೈಫಲ್ಯಗಳನ್ನು ಮುಚ್ಚಿಹಾಕಲು ಸುಳ್ಳು ಆರೋಪಗಳು ಮತ್ತು ದ್ವೇಷ ರಾಜಕಾರಣ ನಡೆಸಲಾಗುತ್ತಿದೆ ಎಂದು ಸಿಎಂ ಹೇಳಿದರು.
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಸ್ವಾತಂತ್ರ್ಯ ಹೋರಾಟದ ಭಾಗವಾಗಿದ್ದು, ಅದು ಕಾಂಗ್ರೆಸ್ ಪಕ್ಷದ ಆಸ್ತಿ. ಅದನ್ನು ಖಾಸಗಿ ಆಸ್ತಿ ಎಂದು ತೋರಿಸಿ ಪ್ರಕರಣ ದಾಖಲಿಸಿದ್ದು ಸಂಪೂರ್ಣ ಅಸತ್ಯ. ವಿಚಾರಣಾ ನ್ಯಾಯಾಲಯದ ತೀರ್ಪು ಸತ್ಯಕ್ಕೆ ಜಯ ದೊರೆತಿದೆ ಎಂಬುದನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದರು.
ಬಿಜೆಪಿಗೆ ಮಹಾತ್ಮ ಗಾಂಧೀಜಿ, ನೆಹರು, ಅಂಬೇಡ್ಕರ್ ಮತ್ತು ಬಡವರ ಅಭಿವೃದ್ಧಿ ಸಹಿಸಲಾಗುವುದಿಲ್ಲ. ಬಡವರು, ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ವಿರುದ್ಧ ಬಿಜೆಪಿ ಮನಸ್ಥಿತಿ ಹೊಂದಿದೆ. ಕಾಂಗ್ರೆಸ್ ಸರ್ಕಾರ ಜನಪರ ಯೋಜನೆಗಳನ್ನು ಜಾರಿಗೆ ತಂದರೆ ಅದನ್ನು ವಿರೋಧಿಸುವುದೇ ಬಿಜೆಪಿಯ ಧೋರಣೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಜಾರಿಗೊಳಿಸಿದ ಪಂಚಖಾತ್ರಿ ಯೋಜನೆಗಳನ್ನು ಟೀಕಿಸಿದ್ದ ಬಿಜೆಪಿಯವರು ಈಗ ಇತರ ರಾಜ್ಯಗಳಲ್ಲಿ ಅದನ್ನೇ ಅನುಸರಿಸುತ್ತಿರುವುದು ಅವರ ದ್ವಂದ್ವ ನೀತಿಯನ್ನು ತೋರಿಸುತ್ತದೆ ಎಂದು ಹೇಳಿದರು.
ಈ ಪ್ರತಿಭಟನೆಯಲ್ಲಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರು, ಶಾಸಕರು ಭಾಗವಹಿಸಿದ್ದು, ಕೇಂದ್ರ ಸರ್ಕಾರ ಸಂವಿಧಾನಾತ್ಮಕ ಸಂಸ್ಥೆಗಳನ್ನು ದುರ್ಬಲಗೊಳಿಸುತ್ತಿರುವುದನ್ನು ಖಂಡಿಸಿ ಧಿಕ್ಕಾರ ಕೂಗಿದರು.
