ಶಿವಮೊಗ್ಗ: ಧರ್ಮಸ್ಥಳ ಗ್ರಾಮದಲ್ಲಿ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳಿಗೆ ಸಂಬಂಧಿಸಿದಂತೆ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಆರೋಪದ ಪ್ರಕರಣದ ಸಾಕ್ಷಿ–ದೂರುದಾರರಾಗಿರುವ ‘ಮಾಸ್ಕ್ ಮ್ಯಾನ್’ ಚಿನ್ನಯ್ಯ ಅವರನ್ನು ಶಿವಮೊಗ್ಗದ ಕೇಂದ್ರ ಕಾರಾಗೃಹದಿಂದ ಗುರುವಾರ ಬೆಳಿಗ್ಗೆ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಚಿನ್ನಯ್ಯ ಅವರಿಗೆ ನವೆಂಬರ್ 24ರಂದು ಮಂಗಳೂರಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದು, ಜಾಮೀನು ಪಡೆಯಲು ಒಂದು ಲಕ್ಷ ರೂಪಾಯಿ ಭದ್ರತಾ ಠೇವಣಿ ಸಲ್ಲಿಸುವಂತೆ ಆದೇಶಿಸಿತ್ತು. ಆದರೆ, ಭದ್ರತಾ ಮೊತ್ತ ಪಾವತಿಯಲ್ಲಿ ತಡವಾದ ಕಾರಣ ಜೈಲಿನಿಂದ ಬಿಡುಗಡೆ ವಿಳಂಬವಾಗಿತ್ತು.
ಬುಧವಾರ ರಾತ್ರಿ ಮಂಗಳೂರಿನಿಂದ ಶಿವಮೊಗ್ಗಕ್ಕೆ ಆಗಮಿಸಿದ ಚಿನ್ನಯ್ಯ ಅವರ ಪತ್ನಿ ಮಲ್ಲಿಕಾ, ಸಹೋದರಿ ಹಾಗೂ ಅವರ ಪರ ವಕೀಲರು ಜಾಮೀನು ಸಂಬಂಧಿತ ದಾಖಲೆಗಳನ್ನು ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಡಾ. ರಂಗನಾಥ್ ಅವರಿಗೆ ಸಲ್ಲಿಸಿದರು. ಎಲ್ಲಾ ಪ್ರಕ್ರಿಯೆಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಸುಮಾರು 8.30ರ ವೇಳೆಗೆ ಚಿನ್ನಯ್ಯ ಅವರನ್ನು ಬಿಡುಗಡೆ ಮಾಡಲಾಯಿತು.
ಚಿನ್ನಯ್ಯನ ಬಿಡುಗಡೆ ಹಿನ್ನೆಲೆಯಲ್ಲಿ ಸೋಗಾನೆ ಕೇಂದ್ರ ಕಾರಾಗೃಹದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಜೈಲು ಆವರಣದೊಳಗೆ ಮಾಧ್ಯಮಗಳಿಗೆ ಪ್ರವೇಶ ನಿರ್ಬಂಧಿಸಲಾಗಿತ್ತು. ಬುಧವಾರ ಸಂಜೆ ನ್ಯಾಯಾಲಯದ ಆದೇಶ ಕಾರಾಗೃಹಕ್ಕೆ ತಲುಪಿದ್ದರಿಂದ ಇಂದು ಬೆಳಿಗ್ಗೆ ಬಿಡುಗಡೆ ಸಾಧ್ಯವಾಯಿತು.
ನ್ಯಾಯಾಲಯ ವಿಧಿಸಿದ ಷರತ್ತುಗಳ ಪ್ರಕಾರ, ಚಿನ್ನಯ್ಯ ಅವರು ಪ್ರತಿ ಎರಡು ದಿನಕ್ಕೊಮ್ಮೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು. ಜೊತೆಗೆ, ಪ್ರಕರಣ ಸಂಬಂಧ ಯಾವುದೇ ರೀತಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಬಾರದು ಎಂಬ ಕಟ್ಟುನಿಟ್ಟಿನ ಸೂಚನೆಯನ್ನು ಬೆಳ್ತಂಗಡಿ ನ್ಯಾಯಾಲಯ ನೀಡಿದೆ.
