ನವದೆಹಲಿ, ಡಿಸೆಂಬರ್ 19: ತಂದೆಯ ಇಚ್ಛೆಗೆ ವಿರುದ್ಧವಾಗಿ ಪ್ರೀತಿಸಿ ಮದುವೆಯಾದ ಮಗಳು ಅಥವಾ ಬೇರೆ ಧರ್ಮದವನನ್ನು ವಿವಾಹವಾದ ಮಗಳಿಗೆ ತಂದೆಯ ಆಸ್ತಿಯಲ್ಲಿ ಪಾಲು ನೀಡದಂತೆ ವಿಲ್ ಬರೆಯುವ ಸಂಪೂರ್ಣ ಹಕ್ಕು ತಂದೆಗೆ ಇದೆ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ತಂದೆಯು ಸ್ವಇಚ್ಛೆಯಿಂದ ಬರೆದಿರುವ ವಿಲ್ ಮಾನ್ಯವಾಗಿದ್ದು, ಅಂತಹ ವಿಲ್‌ಗೆ ನ್ಯಾಯಾಲಯಗಳು ಹಸ್ತಕ್ಷೇಪ ಮಾಡುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.
ನ್ಯಾಯಮೂರ್ತಿಗಳಾದ ಅಶಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ಅವರ ನೇತೃತ್ವದ ಪೀಠವು, ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳು ನೀಡಿದ್ದ ತೀರ್ಪುಗಳನ್ನು ರದ್ದುಗೊಳಿಸಿದೆ. ಕೆಳ ನ್ಯಾಯಾಲಯಗಳು, ಬೇರೆ ಧರ್ಮದ ಯುವಕನನ್ನು ಮದುವೆಯಾದ ಶೈಲಾ ಜೋಸೆಫ್ ಅವರಿಗೆ ಅವರ ತಂದೆ ಎನ್.ಎಸ್. ಶ್ರೀಧರನ್ ಅವರ ಆಸ್ತಿಯಲ್ಲಿ ಪಾಲು ನೀಡಬೇಕು ಎಂದು ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್ ಈ ತೀರ್ಪನ್ನು ತಿರಸ್ಕರಿಸಿದೆ.
ಶ್ರೀಧರನ್ ಅವರು ತಮ್ಮ ಮಗಳು ಸಮುದಾಯದ ಹೊರಗೆ ಮದುವೆಯಾದ ಹಿನ್ನೆಲೆಯಲ್ಲಿ ಆಕೆಯನ್ನು ಕುಟುಂಬದಿಂದ ದೂರವಿಟ್ಟು, ತಮ್ಮ ವಿಲ್‌ನಲ್ಲಿ ಆಕೆಗೆ ಯಾವುದೇ ಆಸ್ತಿಯನ್ನು ನೀಡಿರಲಿಲ್ಲ. ಈ ವಿಲ್ ಮಾನ್ಯವಾಗಿದ್ದು, ತಂದೆಯ ಕೊನೆಯ ಇಚ್ಛೆಯನ್ನು ಗೌರವಿಸಬೇಕೆಂದು ನ್ಯಾಯಪೀಠ ಹೇಳಿದೆ. ಮಗಳು ತಂದೆಯ ಆಸ್ತಿಯಲ್ಲಿ ಹಕ್ಕು ಕೇಳುವಂತೆ ನ್ಯಾಯಾಲಯದ ಮೊರೆ ಹೋಗಿದ್ದರೂ, ತಂದೆಯ ವಿಲ್ ಇದ್ದಲ್ಲಿ ಆಕೆಗೆ ಯಾವುದೇ ಹಕ್ಕು ಇರುವುದಿಲ್ಲ ಎಂದು ತೀರ್ಪು ನೀಡಲಾಗಿದೆ.
ನ್ಯಾಯಪೀಠ ತನ್ನ ತೀರ್ಪಿನಲ್ಲಿ, “ಲಿಂಗ ಸಮಾನತೆಗೂ ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ವಿಲ್ ಬರೆಯದೇ ಇದ್ದಲ್ಲಿ ಪಿತ್ರಾರ್ಜಿತ ಆಸ್ತಿಯಲ್ಲಿ ಮಗಳಿಗೂ ಸಮಾನ ಹಕ್ಕು ಇರುತ್ತಿತ್ತು. ಆದರೆ, ತಂದೆ ಸ್ಪಷ್ಟ ಉದ್ದೇಶದಿಂದ ವಿಲ್ ಬರೆದಿದ್ದರೆ, ಅವರ ಇಚ್ಛೆಯೇ ಅಂತಿಮ. ಇಂತಹ ಸಂದರ್ಭಗಳಲ್ಲಿ ಕಾನೂನು ಮಧ್ಯಪ್ರವೇಶ ಮಾಡುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.
ಈ ತೀರ್ಪು, ವೈಯಕ್ತಿಕ ಸ್ವತ್ತುಗಳ ವಿತರಣೆಯಲ್ಲಿ ವಿಲ್‌ನ ಮಹತ್ವವನ್ನು ಮತ್ತಷ್ಟು ದೃಢಪಡಿಸಿದ್ದು, ಕುಟುಂಬ ಆಸ್ತಿ ವಿವಾದಗಳಿಗೆ ಮಹತ್ವದ ಮಾರ್ಗದರ್ಶನ ನೀಡಲಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
