ಗೋಕರ್ಣ: ರಾಜ್ಯ ರಾಜಕಾರಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಚರ್ಚೆಗಳ ನಡುವೆ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಹತ್ವದ ಹೇಳಿಕೆ ನೀಡಿದ್ದಾರೆ. “ನನ್ನ ಮತ್ತು ಮುಖ್ಯಮಂತ್ರಿ ನಡುವೆ ಒಂದು ಒಪ್ಪಂದವಾಗಿದೆ. ಹೈಕಮಾಂಡ್ ಮಧ್ಯಸ್ಥಿಕೆ ವಹಿಸಿ ಈ ಒಪ್ಪಂದಕ್ಕೆ ತಂದಿದೆ. ಅದರಂತೆ ನಾವಿಬ್ಬರೂ ನಡೆದುಕೊಂಡು ಹೋಗುತ್ತೇವೆ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಗೋಕರ್ಣದಲ್ಲಿ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಮುಖ್ಯಮಂತ್ರಿ ಸ್ಥಾನಕ್ಕೆ ಸಂಬಂಧಿಸಿದ ಊಹಾಪೋಹಗಳಿಗೆ ತೆರೆ ಎಳೆದರು. “ಎರಡೂವರೆ ವರ್ಷದ ಒಪ್ಪಂದವಾಗಿದೆ ಎಂಬ ಮಾತು ಸರಿಯಲ್ಲ. ಅವರು ಐದು ವರ್ಷ ಇರಲ್ಲ ಎಂದು ನಾನು ಯಾವತ್ತೂ ಹೇಳಿಲ್ಲ. ಹೈಕಮಾಂಡ್ ಅವರ ಪರ ಇಲ್ಲ ಎಂದು ಸಹ ನಾನು ಹೇಳಿಲ್ಲ. ಹೈಕಮಾಂಡ್ ಅವರ ಪರ ಇರುವುದರಿಂದಲೇ ಅವರು ರಾಜ್ಯದ ಮುಖ್ಯಮಂತ್ರಿ ಆಗಿದ್ದಾರೆ” ಎಂದು ಹೇಳಿದರು.
ಮುಖ್ಯಮಂತ್ರಿ ಬದಲಾವಣೆ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ನೀವು ಆ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ. ನಮ್ಮ ಪಕ್ಷದೊಳಗೆ ಅಂತಹ ಯಾವುದೇ ಚರ್ಚೆ ಇಲ್ಲ. ಪಕ್ಷ ಹೇಳಿದಂತೆ ನಾವು ಕೇಳುತ್ತೇವೆ. ಹೈಕಮಾಂಡ್ ತೀರ್ಮಾನವೇ ಅಂತಿಮ” ಎಂದು ತಿಳಿಸಿದರು.
ಹಿಂದಿನ ಬಾರಿ ಗೋಕರ್ಣಕ್ಕೆ ಬಂದಾಗ ತಮ್ಮ ಇಷ್ಟಾರ್ಥ ಸಿದ್ಧಿಯಾಗಿತ್ತು ಎಂದು ಹೇಳಿದ್ದೀರಿ, ಈ ಬಾರಿಯೂ ಹಾಗೇನಾದರೂ ಆಗುತ್ತದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, “ಅದೆಲ್ಲವನ್ನು ನಾನು ಸಾರ್ವಜನಿಕವಾಗಿ ಹೇಳುವುದಿಲ್ಲ. ಅದು ನನ್ನ ಮತ್ತು ಆ ತಾಯಿ ನಡುವಿನ ವಿಚಾರ. ಭಕ್ತ ಮತ್ತು ಭಗವಂತನ ನಡುವಿನ ಸಂಬಂಧ” ಎಂದು ಹೇಳಿದರು.
ಗೋಕರ್ಣದಲ್ಲಿ ವಿಘ್ನ ನಿವಾರಕ ವಿಘ್ನೇಶ್ವರ, ಮಹಾಬಲೇಶ್ವರ ಹಾಗೂ ಗಂಗಾಧರೇಶ್ವರ ದೇವಾಲಯಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿರುವುದಾಗಿ ತಿಳಿಸಿದ ಅವರು, “ಐದು ವರ್ಷಗಳ ಹಿಂದೆ ಜಗದೇಶ್ವರಿ ತಾಯಿಯ ಬಳಿ ಪ್ರಾರ್ಥನೆ ಮಾಡಿದ್ದೆ. ಮತ್ತೆ ಇಲ್ಲಿಗೆ ಬರುವೆ ಎಂದು ಸಂಕಲ್ಪ ಮಾಡಿದ್ದೆ. ಅದರಂತೆ ಇಂದು ಬಂದು ಪೂಜೆ ಸಲ್ಲಿಸಿದ್ದೇನೆ. ನನಗೂ ರಾಜ್ಯಕ್ಕೂ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ” ಎಂದರು.
“ಇಂದು ದೇವರ ದರ್ಶನದಿಂದ ಸಂತೃಪ್ತಿ ದೊರೆತಿದೆ. ಹಸನ್ಮುಖಿಯಾಗಿ ಇಲ್ಲಿಂದ ತೆರಳುತ್ತಿದ್ದೇನೆ” ಎಂದು ಹೇಳುವ ಮೂಲಕ ತಮ್ಮ ಮಾತುಗಳನ್ನು ಡಿಸಿಎಂ ಡಿ.ಕೆ. ಶಿವಕುಮಾರ್ ಮುಕ್ತಾಯಗೊಳಿಸಿದರು.
