ಬೆಂಗಳೂರು/ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ವಿಧಾನಮಂಡಲದ ಚಳಿಗಾಲದ ಅಧಿವೇಶನ ಆರಂಭವಾಗಿ ಒಂದು ವಾರಕ್ಕೂ ಅಧಿಕ ಸಮಯ ಕಳೆದಿದ್ದು, ಈ ಬಾರಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಚರ್ಚೆಗೆ ಹೆಚ್ಚಿನ ಅವಕಾಶ ಸಿಕ್ಕಿದೆ. ಆದರೆ, ಈ ಅವಕಾಶವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಲ್ಲಿ ಜಾತ್ಯಾತೀತ ಜನತಾದಳ (ಜೆಡಿಎಸ್) ಹಿಂದೆ ಬೀಳುತ್ತಿರುವಂತೆ ಕಾಣುತ್ತಿದೆ.
ಇದಕ್ಕೆ ಪ್ರಮುಖ ಕಾರಣ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರ ಅನುಪಸ್ಥಿತಿ. ಸದನದಲ್ಲಿ ಕುಮಾರಸ್ವಾಮಿ ಇದ್ದಾಗ, ದಾಖಲೆಗಳೊಂದಿಗೆ ಆಡಳಿತ ಪಕ್ಷವನ್ನು ಪ್ರಶ್ನಿಸುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸುತ್ತಿದ್ದರು. ಅವರ ನಾಯಕತ್ವದಲ್ಲಿ ಜೆಡಿಎಸ್ ಸದನದಲ್ಲಿ ಚುರುಕಾಗಿ ಕಾರ್ಯನಿರ್ವಹಿಸುತ್ತಿದ್ದು, ವಿರೋಧ ಪಕ್ಷವಾಗಿ ಸ್ಪಷ್ಟ ಧ್ವನಿ ಹೊಂದಿತ್ತು. ಆದರೆ, ಪ್ರಸ್ತುತ ಅವರು ಕೇಂದ್ರ ಸಚಿವರಾಗಿ ಕಾರ್ಯನಿರ್ವಹಿಸುತ್ತಿರುವ ಹಿನ್ನೆಲೆಯಲ್ಲಿ ವಿಧಾನಸಭಾ ಅಧಿವೇಶನದಲ್ಲಿ ಪಾಲ್ಗೊಳ್ಳಲಾಗದೆ ಇರುವುದರಿಂದ, ಜೆಡಿಎಸ್ ಪಕ್ಷಕ್ಕೆ ಈ ಕೊರತೆ ತೀವ್ರವಾಗಿ ಅನುಭವವಾಗುತ್ತಿದೆ.
ಕೇಂದ್ರದ ಜವಾಬ್ದಾರಿಗಳ ಕಾರಣದಿಂದ ಕುಮಾರಸ್ವಾಮಿ ಅವರಿಗೆ ರಾಜ್ಯ ರಾಜಕೀಯ ಹಾಗೂ ಪಕ್ಷ ಸಂಘಟನೆಗೆ ಅಗತ್ಯ ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ನಿಖಿಲ್ ಕುಮಾರಸ್ವಾಮಿ ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಆದರೂ, ಸದನದ ಒಳಗೆ ಸರ್ಕಾರದ ವಿರುದ್ಧ ಒಗ್ಗಟ್ಟಿನ ಹೋರಾಟ ನಡೆಸುವಲ್ಲಿ ಜೆಡಿಎಸ್ ಬಲಹೀನವಾಗಿರುವುದು ಸ್ಪಷ್ಟವಾಗಿ ಕಾಣಿಸುತ್ತಿದೆ.
ಪಕ್ಷದೊಳಗಿನ ಕೆಲವು ಶಾಸಕರಲ್ಲೂ ಈ ಕುರಿತು ಅಸಮಾಧಾನವಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಬಹಿರಂಗವಾಗಿ ಹೇಳಿಕೊಳ್ಳುವ ಪರಿಸ್ಥಿತಿಯಲ್ಲಿ ಅವರು ಇಲ್ಲ. ಈ ಕುರಿತು ಪ್ರತಿಕ್ರಿಯೆ ನೀಡಿದ ಜೆಡಿಎಸ್ ಶಾಸಕರೊಬ್ಬರು, “ಕುಮಾರಣ್ಣ ಸದನದಲ್ಲಿ ಕಾಣಿಸಿಕೊಳ್ಳದಿದ್ದರೂ, ಸಣ್ಣ ಸಣ್ಣ ವಿಚಾರಗಳಿಗೂ ನಮಗೆ ದೂರವಾಣಿ ಮೂಲಕ ಮಾರ್ಗದರ್ಶನ ನೀಡುತ್ತಿದ್ದಾರೆ. ಆದರೂ, ಸದನದಲ್ಲಿ ಅವರ ಉಪಸ್ಥಿತಿಯನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ” ಎಂದು ಹೇಳಿದ್ದಾರೆ.
ಈ ವಿಷಯದ ಕುರಿತು ಜೆಡಿಎಸ್ ಎಂಎಲ್ಸಿ ಶರವಣ ಮಾತನಾಡಿ, “ಪಕ್ಷವಾಗಿ ನಾವು ಕುಮಾರಸ್ವಾಮಿ ಅವರ ಮಾರ್ಗದರ್ಶನ ಮತ್ತು ಉಪಸ್ಥಿತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಆದರೆ, ಅವರಿಗೆ ಕೇಂದ್ರ ಸಚಿವಾಲಯದ ಜವಾಬ್ದಾರಿ ಇರುವುದರಿಂದ ಅದು ಅನಿವಾರ್ಯ. ನಾವು ನಿರಂತರವಾಗಿ ಅವರೊಂದಿಗೆ ಸಂಪರ್ಕದಲ್ಲಿದ್ದು ಸಲಹೆ ಪಡೆಯುತ್ತಿದ್ದೇವೆ. ಆದರೂ, ಅಧಿವೇಶನದಲ್ಲಿ ಅವರ ಸ್ಥಾನವನ್ನು ಯಾರೂ ತುಂಬಲು ಸಾಧ್ಯವಿಲ್ಲ. ಕುಮಾರಣ್ಣಗೆ ಕುಮಾರಣ್ಣನೇ ಸಾಟಿ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಇನ್ನು ಶಾಸಕ ಶರಣಗೌಡ ಕಂದಕೂರ್ ಮಾತನಾಡಿ, “ಒಂದು ಕಾಲದಲ್ಲಿ ಉತ್ತರ ಕರ್ನಾಟಕದಿಂದ ಜೆಡಿಎಸ್‌ಗೆ ಉತ್ತಮ ಸಂಖ್ಯಾಬಲ ಇತ್ತು. ಈಗ ಅದು ಕಡಿಮೆಯಾಗಿರುವುದು ನಿಜ. ಆದರೂ ಸರ್ಕಾರವು ನಮ್ಮ ಸಮಸ್ಯೆಗಳ ಬಗ್ಗೆ ಕಿವಿಕೊಟ್ಟು ಸ್ಪಂದಿಸಬೇಕು” ಎಂದು ಒತ್ತಾಯಿಸಿದರು.
ರಾಜಕೀಯ ವಿಶ್ಲೇಷಕ ಬಿಎಸ್ ಮೂರ್ತಿ ಅವರು ಈ ಕುರಿತು ಪ್ರತಿಕ್ರಿಯಿಸಿ, “ಉತ್ತರ ಕರ್ನಾಟಕದಲ್ಲಿ ಜೆಡಿಎಸ್ ಶಾಸಕರ ಸಂಖ್ಯೆ ಕಡಿಮೆಯಾಗಿರುವುದರಿಂದ ಸದನದಲ್ಲಿ ಆ ಭಾಗದ ಸಮಸ್ಯೆಗಳ ಕುರಿತು ಪ್ರಭಾವಿ ಧ್ವನಿ ಎತ್ತಲು ಪಕ್ಷಕ್ಕೆ ಕಷ್ಟವಾಗುತ್ತಿದೆ. ಅಧಿವೇಶನದ ವೇಳೆ ಈ ವಿಚಾರಗಳನ್ನು ಪರಿಣಾಮಕಾರಿಯಾಗಿ ಮುಂದಿಟ್ಟಿದ್ದರೆ, ಅದು ಜೆಡಿಎಸ್ ಪಕ್ಷಕ್ಕೆ ರಾಜಕೀಯವಾಗಿ ಲಾಭವಾಗಬಹುದಿತ್ತು” ಎಂದು ವಿಶ್ಲೇಷಿಸಿದ್ದಾರೆ.
ಒಟ್ಟಾರೆ, ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಮೇಲೆ ಗಮನ ಹರಿಸುವ ಈ ಸಂದರ್ಭದಲ್ಲಿ, ಎಚ್‌ಡಿ ಕುಮಾರಸ್ವಾಮಿ ಅವರ ಅನುಪಸ್ಥಿತಿ ಜೆಡಿಎಸ್ ಪಕ್ಷಕ್ಕೆ ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆಯೇ? ಎಂಬ ಪ್ರಶ್ನೆ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
