ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ನೂತನ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ ಹಿರಿಯ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಅವರು ಮೊದಲ ಬಾರಿಗೆ ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಭೇಟಿ ನೀಡಿ ಸಮಗ್ರ ಹಾಗೂ ಕಠಿಣ ಪರಿಶೀಲನೆ ನಡೆಸಿದರು. ಜೈಲಿನಲ್ಲಿ ಕೈದಿಗಳಿಗೆ ನೀಡಲಾಗುತ್ತಿದೆ ಎನ್ನಲಾದ ವಿಶೇಷ ಸೌಲಭ್ಯಗಳು ಹಾಗೂ ಶಿಸ್ತುಭಂಗದ ಆರೋಪಗಳು ಸುದ್ದಿಯಾಗಿರುವ ಹಿನ್ನೆಲೆ ಈ ಭೇಟಿ ಮಹತ್ವ ಪಡೆದಿದೆ.
ಪರಿಶೀಲನೆ ವೇಳೆ ಕೊಲೆ ಪ್ರಕರಣದಲ್ಲಿ ಬಂಧನದಲ್ಲಿರುವ ನಟ ದರ್ಶನ್ ಅವರನ್ನು ಡಿಜಿಪಿ ಅಲೋಕ್ ಕುಮಾರ್ ಭೇಟಿಯಾಗಿ ಪ್ರಕರಣದ ಸ್ಥಿತಿ, ನ್ಯಾಯಾಲಯದ ವಿಚಾರಣೆ ಮತ್ತು ಜೈಲಿನ ಪರಿಸ್ಥಿತಿಗಳ ಕುರಿತು ಮಾಹಿತಿ ಪಡೆದರು. ದರ್ಶನ್ ಯಾವುದೇ ವಿಶೇಷ ಅಸಮಾಧಾನ ವ್ಯಕ್ತಪಡಿಸಿಲ್ಲ ಎಂದು ತಿಳಿಸಿದ ಅವರು, ದರ್ಶನ್ ಸೇರಿದಂತೆ ಆರು ಮಂದಿ ಕೈದಿಗಳು ಒಂದೇ ಬ್ಯಾರಕ್‌ನಲ್ಲಿ ಸಾಮಾನ್ಯ ಕೈದಿಗಳಂತೆ ವಾಸವಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಜೈಲಿನ ಹೊರಾಂಗಣ ಪ್ರದೇಶ, ಚೆಕ್‌ಪೋಸ್ಟ್‌ಗಳು, ಪ್ರತಿಯೊಂದು ಬ್ಯಾರಕ್, ಅಡುಗೆ ಮನೆ, ಆಸ್ಪತ್ರೆ ಹಾಗೂ ಬೇಕರಿ ವಿಭಾಗಗಳವರೆಗೆ ಭೇಟಿ ನೀಡಿ ಪರಿಶೀಲಿಸಿದ ಡಿಜಿಪಿ, ಕೈದಿಗಳೊಂದಿಗೆ ನೇರವಾಗಿ ಸಂವಾದ ನಡೆಸಿದರು. ಆಹಾರ ವ್ಯವಸ್ಥೆ, ಸ್ವಚ್ಛತೆ, ಆರೋಗ್ಯ ಸೇವೆ ಹಾಗೂ ಭದ್ರತೆ ಕುರಿತು ಮಾಹಿತಿ ಪಡೆದ ಅವರು, ಯಾವುದೇ ರೀತಿಯ ರಾಜಾತಿಥ್ಯ, ಅಕ್ರಮ ಸೌಲಭ್ಯಗಳು ಅಥವಾ ಶಿಸ್ತುಭಂಗ ನಡೆಯದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮೊಬೈಲ್ ಫೋನ್, ಗಾಂಜಾ, ಬೀಡಿ–ಸಿಗರೇಟ್ ಸೇರಿದಂತೆ ನಿಷೇಧಿತ ವಸ್ತುಗಳಿಗೆ ಸಂಪೂರ್ಣ ನಿಷೇಧವಿರಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದ ಅಲೋಕ್ ಕುಮಾರ್, ಇಂತಹ ವಸ್ತುಗಳ ಸಾಗಾಣಿಕೆ ಅಥವಾ ಬಳಕೆಯಲ್ಲಿ ಯಾರೇ ಭಾಗಿಯಾಗಿದ್ದರೂ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ವೈದ್ಯರು ಚಿಕಿತ್ಸೆ ನೀಡುವ ಮಟ್ಟಕ್ಕೆ ಮಾತ್ರ ಸೀಮಿತವಾಗಬೇಕು, ಯಾವುದೇ ಅಕ್ರಮ ಚಟುವಟಿಕೆಗಳಿಗೆ ಅವಕಾಶ ಕೊಡಬಾರದು ಎಂದು ಅವರು ಸೂಚಿಸಿದರು.
ರಾಜ್ಯಾದ್ಯಂತ ಕಳೆದ 72 ಗಂಟೆಗಳಲ್ಲಿ ಜೈಲುಗಳಲ್ಲಿ ತಪಾಸಣೆ ತೀವ್ರಗೊಳಿಸಲಾಗಿದ್ದು, ಬೆಂಗಳೂರು, ಮೈಸೂರು ಮತ್ತು ಕಾರವಾರ ಜೈಲುಗಳಲ್ಲಿ ನಿಷೇಧಿತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಜಿಪಿ ಮಾಹಿತಿ ನೀಡಿದರು. ಹಿಂಸಾತ್ಮಕ ಘಟನೆಗಳಲ್ಲಿ ಭಾಗಿಯಾದ ಕೈದಿಗಳನ್ನು ಇತರ ಜೈಲುಗಳಿಗೆ ವರ್ಗಾಯಿಸಿರುವುದಾಗಿ ತಿಳಿಸಿದರು. ಜೈಲು ವ್ಯವಸ್ಥೆಯಲ್ಲಿ ಶಿಸ್ತು ಮತ್ತು ಭದ್ರತೆ ಕಾಪಾಡಲು ಈ ಕ್ರಮಗಳನ್ನು ಮೊದಲ ಹಂತ ಎಂದು ವಿವರಿಸಿದ ಅವರು, ಮುಂದಿನ ದಿನಗಳಲ್ಲಿ ಇನ್ನಷ್ಟು ಸುಧಾರಣಾ ಕ್ರಮಗಳು ಜಾರಿಗೆ ಬರಲಿವೆ ಎಂದು ಹೇಳಿದರು.
ಪರಿಶೀಲನೆ ವೇಳೆ ಜೈಲು ಸುತ್ತಮುತ್ತಲಿನ ಪಾರ್ಕಿಂಗ್ ಅವ್ಯವಸ್ಥೆ ಹಾಗೂ ಸಿಬ್ಬಂದಿಯ ನಿರ್ಲಕ್ಷ್ಯದ ಮೇಲೂ ಅಸಮಾಧಾನ ವ್ಯಕ್ತಪಡಿಸಿದ ಡಿಜಿಪಿ, ಲಭ್ಯವಿರುವ ಜಾಗವನ್ನು ಸಮರ್ಪಕವಾಗಿ ಬಳಸಿಕೊಂಡು ವ್ಯವಸ್ಥೆ ಸುಧಾರಿಸುವಂತೆ ಸೂಚಿಸಿದರು. ಯಾವುದೇ ಅಕ್ರಮ ಅಥವಾ ಲೋಪ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಅನಿವಾರ್ಯ ಎಂದು ಅವರು ಎಚ್ಚರಿಸಿದರು.
