ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಕೊನೆ ಮೈಲಿ ಸಂಪರ್ಕವನ್ನು ಮತ್ತಷ್ಟು ಸುಧಾರಿಸುವ ಉದ್ದೇಶದಿಂದ ಆರ್.ವಿ. ರಸ್ತೆ–ಬೊಮ್ಮಸಂದ್ರ ಹಳದಿ ಮಾರ್ಗದ ಒಂಬತ್ತು ಮೆಟ್ರೋ ನಿಲ್ದಾಣಗಳ ಸಮೀಪ ಹೊಸ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಮೆಟ್ರೋ ಹಾಗೂ ಬಸ್ ನಡುವಿನ ಸಂಪರ್ಕ ಸುಗಮವಾಗಿ, ಹೆಚ್ಚಿನ ಪ್ರಯಾಣಿಕರು ಸಾರ್ವಜನಿಕ ಸಾರಿಗೆಯನ್ನು ಬಳಸುವಂತೆ ಪ್ರೋತ್ಸಾಹ ನೀಡುವ ಗುರಿ ಹೊಂದಲಾಗಿದೆ.
ಮೆಟ್ರೋ ಪ್ರಯಾಣಿಕರ ಅನುಕೂಲಕ್ಕಾಗಿ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ಹಾಗೂ ಬಿಎಂಟಿಸಿ ಸಂಯುಕ್ತವಾಗಿ ಮಾರ್ಗ ಪರಿಶೀಲನೆ ನಡೆಸಿದ್ದು, ಅದರ ಆಧಾರದಲ್ಲಿ ಕೆಲವೆಡೆ ಹೊಸ ಬಸ್ ನಿಲ್ದಾಣಗಳನ್ನು ಸ್ಥಾಪಿಸಲಾಗಿದೆ. ಜೊತೆಗೆ, ಕೆಲವು ಹಳೆಯ ಬಸ್ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣಗಳಿಗೆ ಸಮೀಪವಾಗುವಂತೆ ಸ್ಥಳಾಂತರಿಸಲಾಗಿದೆ.
ಹೆಬ್ಬಗೋಡಿ, ಬೆರೆಟೇನ ಅಗ್ರಹಾರ, ಸಿಂಗಸಂದ್ರ, ಹೊಂಗಸಂದ್ರ, ಸೆಂಟ್ರಲ್ ಸಿಲ್ಕ್ ಬೋರ್ಡ್ ಹಾಗೂ ಆರ್.ವಿ. ರಸ್ತೆ ಮೆಟ್ರೋ ನಿಲ್ದಾಣಗಳ ಬಳಿ ಹೊಸದಾಗಿ ಬಿಎಂಟಿಸಿ ಬಸ್ ನಿಲ್ದಾಣಗಳನ್ನು ನಿರ್ಮಿಸಲಾಗಿದೆ. ಇನ್ನು ಎಲೆಕ್ಟ್ರಾನಿಕ್ ಸಿಟಿ, ಹೊಸ ರಸ್ತೆ ಮತ್ತು ರಾಗಿಗುಡ್ಡ ಮೆಟ್ರೋ ನಿಲ್ದಾಣಗಳ ಬಳಿ 100 ಮೀಟರ್‌ಗೂ ಹೆಚ್ಚು ದೂರದಲ್ಲಿದ್ದ ಬಸ್ ನಿಲ್ದಾಣಗಳನ್ನು ಮೆಟ್ರೋ ನಿಲ್ದಾಣದ ಸಮೀಪಕ್ಕೆ ಸ್ಥಳಾಂತರಿಸಲಾಗಿದೆ.
ಇದಲ್ಲದೆ, ಜಯದೇವ, ಬಿಟಿಎಂ ಲೇಔಟ್, ಬೊಮ್ಮನಹಳ್ಳಿ, ಕುಡ್ಡು ಗೇಟ್, ಇನ್ಫೋಸಿಸ್ ಫೌಂಡೇಶನ್ ಮತ್ತು ಕೋಣಪ್ಪನ ಅಗ್ರಹಾರ ಮೆಟ್ರೋ ನಿಲ್ದಾಣಗಳ 100 ಮೀಟರ್ ವ್ಯಾಪ್ತಿಯೊಳಗೆ ಈಗಾಗಲೇ ಬಸ್ ನಿಲ್ದಾಣಗಳು ಲಭ್ಯವಿವೆ. ಆದರೆ ಹಸ್ಕೂರು ರಸ್ತೆ ಹಾಗೂ ಬೊಮ್ಮಸಂದ್ರ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಳದ ಕೊರತೆಯಿಂದ ಬಸ್ ನಿಲ್ದಾಣಗಳನ್ನು ಸ್ಥಳಾಂತರಿಸಲು ಸಾಧ್ಯವಾಗಿಲ್ಲ.
ಈ ಹೊಸ ಹಾಗೂ ಸುಧಾರಿತ ಬಸ್ ಸಂಪರ್ಕವನ್ನು ಮೆಟ್ರೋ ಪ್ರಯಾಣಿಕರು ಸದುಪಯೋಗಪಡಿಸಿಕೊಳ್ಳುವಂತೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಮನವಿ ಮಾಡಿದೆ.
