ಪ್ರಮುಖ ಮುಖ್ಯಾಂಶಗಳು:
-
ತಮಿಳುನಾಡು ನೂತನ ಸಿಎಂ ವಿಜಯ್ ಗೆಲುವಿನ ಬಗ್ಗೆ ಸೂಪರ್ಸ್ಟಾರ್ ರಜನಿಕಾಂತ್ ಮೆಚ್ಚುಗೆ.
-
ಚುನಾವಣೆಯಲ್ಲಿ ಸೋತ ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಭೇಟಿ ಬಗ್ಗೆ ಸ್ಪಷ್ಟನೆ.
-
2021ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೆ ನಾನೇ ಗೆಲ್ಲುತ್ತಿದ್ದೆ ಎಂದ ತಲೈವಾ.
ಚೆನ್ನೈ: ತಮಿಳುನಾಡು ಮುಖ್ಯಮಂತ್ರಿಯಾಗಿ ದಳಪತಿ ವಿಜಯ್ ಅಧಿಕಾರಕ್ಕೇರುತ್ತಿದ್ದಂತೆ, ಸೂಪರ್ಸ್ಟಾರ್ ರಜನಿಕಾಂತ್ ಅವರಿಗೆ ಅಸೂಯೆ ಶುರುವಾಗಿದೆ ಎಂಬ ವದಂತಿಗಳಿಗೆ ತಲೈವಾ ಖಡಕ್ ಉತ್ತರ ನೀಡಿದ್ದಾರೆ. “ನನಗೂ ವಿಜಯ್ಗೂ 25 ವರ್ಷಗಳ ವಯಸ್ಸಿನ ಅಂತರವಿದೆ, ಅವರ ಗೆಲುವಿನ ಬಗ್ಗೆ ನನಗೇಕೆ ಹೊಟ್ಟೆಕಿಚ್ಚು?” ಎಂದು ರಜನಿಕಾಂತ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.
ಭಾನುವಾರ (ಮೇ 17) ಚೆನ್ನೈನ ಪೋಯಸ್ ಗಾರ್ಡನ್ನಲ್ಲಿರುವ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಸಿಎಂ ಎಂ.ಕೆ. ಸ್ಟಾಲಿನ್ ಅವರನ್ನು ಭೇಟಿಯಾದ ಬಳಿಕ ಸೃಷ್ಟಿಯಾದ ಊಹಾಪೋಹಗಳಿಗೆ ತೆರೆ ಎಳೆದರು.
ಸ್ಟಾಲಿನ್ ಭೇಟಿ ಬಗ್ಗೆ ಸ್ಪಷ್ಟನೆ: ‘ಅಷ್ಟು ಚೀಪ್ ನಾನಲ್ಲ’ “ಚುನಾವಣೆಯ ಬಳಿಕ ಕೊಳತ್ತೂರು ಕ್ಷೇತ್ರದಲ್ಲಿ ಸೋಲುಂಡ ಸ್ಟಾಲಿನ್ ಅವರನ್ನು ನೋಡಿ ನನಗೆ ಬೇಸರವಾಯಿತು. ಹೀಗಾಗಿ ಅವರನ್ನು ಭೇಟಿಯಾಗಿ ಸಾಂತ್ವನ ಹೇಳಿ ಬಂದೆ ಅಷ್ಟೇ. ಅದನ್ನು ಬಿಟ್ಟು ಸುಖಾಸುಮ್ಮನೆ ಇನ್ನೊಬ್ಬರ ಬಗ್ಗೆ ಏನೇನೋ ಮಾತನಾಡಲು, ಬೇರೆಯವರ ವಿಷಯಗಳಿಗೆ ಮೂಗು ತೂರಿಸುವಷ್ಟು ‘ಚೀಪ್’ ಈ ರಜನಿ ಅಲ್ಲ” ಎಂದು ಗುಡುಗಿದ್ದಾರೆ.
ನನಗ್ಯಾಕೆ ಅಸೂಯೆ? ವಿಜಯ್ಗೆ ಶುಭವಾಗಲಿ! ವಿಜಯ್ ಗೆಲುವಿನ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, “ನಾನು ರಾಜಕೀಯದಲ್ಲೇ ಇಲ್ಲ ಎಂದಮೇಲೆ ವಿಜಯ್ ಬಗ್ಗೆ ನನಗೇಕೆ ಅಸೂಯೆ? ಅವರ ಗೆಲುವು ನನಗೆ ಆಶ್ಚರ್ಯ ಹಾಗೂ ಖುಷಿ ಎರಡನ್ನೂ ತಂದಿದೆ. ನೂತನ ಸಿಎಂ ಆಗಿರುವ ವಿಜಯ್ ಅವರಿಂದ ಜನರಿಗೆ ಸಾಕಷ್ಟು ನಿರೀಕ್ಷೆಗಳಿವೆ. ಅವರಿಗೆ ಒಳ್ಳೆಯದಾಗಲಿ” ಎಂದು ರಜನಿ ಹಾರೈಸಿದರು.
‘ಚುನಾವಣೆಗೆ ನಿಂತಿದ್ದರೆ ಖಂಡಿತ ಗೆಲ್ಲುತ್ತಿದ್ದೆ’ ಇದೇ ವೇಳೆ ತಮ್ಮ ರಾಜಕೀಯ ಪ್ರವೇಶದ ಹಿಂದಿನ ನಿರ್ಧಾರವನ್ನು ಮೆಲುಕು ಹಾಕಿದ ಸೂಪರ್ಸ್ಟಾರ್, “ಒಂದು ವೇಳೆ ನಾನು 2021ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದರೆ, ಅಂದು ಖಂಡಿತವಾಗಿಯೂ ಗೆಲುವು ಸಾಧಿಸುತ್ತಿದ್ದೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
